ನಾಟಿಂಗ್ಯಮ್
ಇಂಗ್ಲೆಂಡಿನ ನಾಟಿಂಗ್ಯಮ್‍ಷೈರ್ ಕೌಂಟಿಯ ಆಡಳಿತ ಕೇಂದ್ರ. ಬರ್ಮಿಂಗ್ಯಮ್ ಪಟ್ಟಣದ ಈಶಾನ್ಯಕ್ಕೆ 75 ಕಿಮೀ. ದೂರದಲ್ಲಿ ಟ್ರೆಂಡ್ ನದಿಯ ದಡದಲ್ಲಿ ಉ.ಅ. 52( 58' ಮತ್ತು ಪ.ರೇ. 1(10' ಮೇಲೆ ಇದೆ. ಮರಳೂ ದಿಬ್ಬವೊಂದರ ಮೇಲಿದ್ದ ಇದರ ಮೂಲ ನಿವೇಶನದಲ್ಲಿ 6ನೆಯ ಶತಮಾನದಲ್ಲಿ ಆಂಗ್ಲೊ-ಸ್ಯಾಕ್ಸನ್ನರು ನೆಲಸಿ ಇದಕ್ಕೆ ಸ್ಲಾಟಿಂಗ್ಯಮ್ (ಸ್ಲಾಟ್ ಜನರ ಗ್ರಾಮ) ಎಂಬ ಹೆಸರಿಟ್ಟರು. 9ನೆಯ ಶತಮಾನದಲ್ಲಿ ಡೆನ್‍ಮಾರ್ಕಿನಿಂದ ಬಂದ ಡೇನರು ಇದನ್ನು ಆಕ್ರಮಿಸಿದರು. ಆಗ ಇದು ಡೇನರ ಆಡಳಿತ ಘಟಕದ (ಡೇನ್‍ಲಾ) 5 ಪಟ್ಟಣಗಳಲ್ಲಿ ಒಂದು ಆಗಿತ್ತು. ನಾರ್ಮನರು ಇಂಗ್ಲೆಂಡನ್ನು ಆಕ್ರಮಿಸಿದ ತರುವಾಯ ಇಲ್ಲಿ ಹೊಸ ಪಟ್ಟಣವನ್ನು ಕಟ್ಟಿದರು (1066). ಸ್ಯಾಕ್ಸನರು ಸ್ಥಾಪಿಸಿದ ಹಳೆಯ ಪಟ್ಟಣವೂ ಅಸ್ತಿತ್ವದಲ್ಲಿತ್ತು. 1300ರವರೆಗೆ ಈ ಎರಡೂ ವಸತಿಗಳಿಗೆ ಪ್ರತ್ಯೇಕ ಆಡಳಿತ ವ್ಯವಸ್ಥೆಗಳಿದ್ದವು. 1449ರಲ್ಲಿ 6ನೆಯ ಹೆನ್ರಿ ನಾಟಿಂಗ್ಯಮ್ ಪಟ್ಟಣಕ್ಕೆ ಮಾರುಕಟ್ಟೆ ನಡೆಸುವುದೂ ಸೇರಿ ಎಲ್ಲ ಅಧಿಕಾರಗಳನ್ನೂ ನೀಡಿದ. ನಗರಪಾಲನನ್ನು (ಷೆರಿಫ್) ನೇಮಿಸಿದ. ದೊರೆ 2ನೆಯ ಹೆನ್ರಿ 1155ರಲ್ಲಿ ಹೊರಡಿಸಿದ ಪ್ರಣಾಳಿಕೆಯ ಪ್ರಕಾರ ಸ್ಥಾಪಿಸಿದ ಮಾರುಕಟ್ಟೆ ಆಧುನಿಕ ನಗರದ ಮಧ್ಯಭಾಗದಲ್ಲಿದೆ. ಸ್ಯಾಕ್ಸನರು ಪಟ್ಟಣವನ್ನು ಸ್ಥಾಪಿಸಿದ ಸ್ಟ್ಯಾಂಡರ್ಡ್ ಹಿಲ್ ಬಳಿ ನಾಟಿಂಗ್ಯಮ್ ದುರ್ಗವಿದೆ. ಇಂಗ್ಲೆಂಡಿನ ಅಂತರ್ಯುದ್ಧದ ಕಾಲದಲ್ಲಿ ಈ ಬೆಟ್ಟದ ಬಳಿ 1ನೆಯ ಚಾಲ್ರ್ಸ್ ದೊರೆ ತನ್ನ ಧ್ವಜವನ್ನು (ಸ್ಟಾಂಡರ್ಡ್) ಏರಿಸಿ ಯುದ್ಧ ಪ್ರಾರಂಭಿಸಿದ (1642). ಆದ್ದರಿಂದ ಈ ಬೆಟ್ಟಕ್ಕೆ ಸ್ಟಾಂಡರ್ಡ್ ಹಿಲ್ ಎಂಬ ಹೆಸರು ಬಂತು. ಮರುವರ್ಷವೇ ಈ ಪಟ್ಟಣವನ್ನೂ ಇದರ ದುರ್ಗವನ್ನೂ ಕ್ರಾಮ್ವೆಲನ ಸೈನ್ಯ ಹಿಡಿಯಿತು. ಇಲ್ಲಿಯ ಕ್ಯಾಸಲ್ ಗ್ರೀನ್ ಬಳಿ ಐತಿಹ್ಯಗಳ ವೀರ ರಾಬಿನ್ ಹುಡ್ ಮತ್ತು ಅವನ ಸಂಗಡಿಗರು ಇದ್ದ ಅರಣ್ಯವಿದೆ.

ನಾಟಿಂಗ್ಯಮ್‍ನ ಶಿಕ್ಷಣ ಸಂಸ್ಥೆಗಳು ನಾಟಿಂಗ್ಯಮ್ ಗ್ರ್ಯಾಮರ್ ಸ್ಕೂಲ್ (1153), ನಾಟಿಂಗ್ಯಮ್ ಬಾಲಿಕೆಯರ ಪ್ರೌಢಶಾಲೆ (1875) ಮತ್ತು ವಿಶ್ವವಿದ್ಯಾಲಯ ಕಾಲೇಜ್ (1881). ನಾಟಿಂಗ್ಯಮ್ ವಿಶ್ವವಿದ್ಯಾಲಯ 1948ರಲ್ಲಿ ಸ್ಥಾಪಿತವಾಯಿತು. ಇಲ್ಲಿ ಎರಡು ನಾಟಕಮಂದಿರಗಳಿವೆ. ಆರ್ಕ್‍ರೈಟ್ ತನ್ನ ಪ್ರಥಮ ನೂಲುವ ಸಾಧನವನ್ನೂ (ಸ್ಪಿನ್ನಿಂಗ್ ಫ್ರೇಮ್) ಹಾರ್‍ಗ್ರೇಮ್ ತನ್ನ ಸ್ಪಿನಿಂಗ್ ಜೆನ್ನಿಯನ್ನೂ ಇಲ್ಲಿ ಉಪಜ್ಞಿಸಿದರು. ಕೈಗಾರಿಕಾ ಕ್ರಾಂತಿಯ ಆಗಮನವನ್ನು ಸಾರಿದ ಈ ಉಪಜ್ಞೆಗಳನ್ನು ಬಳಕೆಗೆ ತಂದಾಗ ಇದನ್ನು ಪ್ರತಿಭಟಿಸಿ 1811-12 ಮತ್ತು 1816-17ರಲ್ಲಿ ಕೈಕೆಲಸಗಾರರ ಗಲಭೆಗಳಾದವು. 19ನೆಯ ಶತಮಾನದಲ್ಲಿ ಲಾರ್ಡ್ ಬೈರನ್, 20ನೆಯ ಶತಮಾನದಲ್ಲಿ ಕಾದಂಬರಿಕಾರ ಡಿ.ಎಚ್. ಲಾರೆನ್ಸ್ ಇಲ್ಲಿದ್ದರು. ಇದು ರೈಲ್ವೆ, ರಸ್ತೆ ಮತ್ತು ಜಲಮಾರ್ಗಗಳ ಕೇಂದ್ರ. ಕಾಲುಚೀಲ, ಲೇಸ್ ಹಾಗೂ ಬಟ್ಟೆ ತಯಾರಿಕೆಗೆ ಹಿಂದಿನಿಂದಲೂ ಇದು ಪ್ರಸಿದ್ಧವಾಗಿದೆ. ಸಿಗರೇಟ್ ಮತ್ತು ಔಷಧಗಳನ್ನು ಇಲ್ಲಿ ತಯಾರಿಸುತ್ತಾರೆ. ನಾಟಿಂಗ್ಯಮ್ ನಗರದ ಪ್ರದೇಶದ ಜನಸಂಖ್ಯೆ 6,74,882 (1971). ನಗರದ ಜನಸಂಖ್ಯೆ 2,99,758.
  (ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ